"ಅಜ್ಜಿ ನೆಟ್ಟ ನಂದಿ ಬಟ್ಟಲು"
ಹೀಗೆ ಒಮ್ಮೆ ನಮ್ಮ ನಾಟಕದ ತಾಲೀಮು ಮುಗಿಸಿ, ಪಕ್ಕದಲ್ಲೇ ಇದ್ದ ಒಂದು ಸಣ್ಣ ಹೋಟೆಲ್ ನಲ್ಲಿ ರಾತ್ರಿಯ ಡಿನ್ನರ್ ಮುಗಿಸಿ ಆಚೆ ಬಂದು ನಿಂತ ನಾವು, ತಣ್ಣನೆ ಬೀಸುತ್ತಿದ್ದ ಗಾಳಿಯ ಸವಿಯುತ್ತಿದ್ದೆವು. ಹೋಟೆಲ್ ನ ಆಚೆ ಒಂದು ಚಿಕ್ಕ ಮರವಿತ್ತು, 10-12 ಅಡಿ ಎತ್ತರವಷ್ಟೇ, ಅಲ್ಲಲ್ಲಿ ಬಾರಿ ಪ್ರಮಾಣದ ಹೂವುಗಳು ಅರಳಿದ್ದವು, ಚಿಕ್ಕ ಹಾಗೂ ಬೆಳ್ಳಗೆ ಇದ್ದ ಹೂವುಗಳು ಯಾವ ರೀತಿಯ ವಾಸನೆಯನ್ನು ಬೀರುತ್ತಿರಲಿಲ್ಲ. "ಯಾವ್ ಹೂವು ಇದು? " ಎಂದು ನನ್ನ ಹೆಂಡತಿ ಕೇಳಿದಳು. "ನಂದಿ ಬಟ್ಟಲು ಇರಬಹುದು" ಎಂದೆ ನಾನು, "ಅಲ್ವಾ ಅಮ್ಮ?" ಅಂತ ನನ್ನ ಅಮ್ಮನ ತಿರುಗಿ ಕೇಳಿದೆ "ಹಾ, ಹೌದು, ನಂದಿ ಬಟ್ಟಲೇ!" ಎಂದಳು ನನ್ನ ಅಮ್ಮ. ಸುವಾಸನೆ ರಹಿತ ಹೂವುಗಳನ್ನು ಕಂಡರೆ ನನ್ನ ಮಡದಿಗೆ ಎಲ್ಲಿಲ್ಲದ ಒಲವು, ಹೋಗಿ ಒಮ್ಮೆಲೆ ಅದರ ಅಡಿ ನಿಂತು ಅರಳಿದ ಹೂವುಗಳ ಸೌಂದರ್ಯವನ್ನು ಕಣ್ಣುಗಳಲ್ಲೇ ಸವಿಯ ತೊಡಗಿದಳು. ಅವಳ ಪಕ್ಕದಲ್ಲೆ ನನ್ನ ಅಮ್ಮನೂ ನಡೆದು ಹೋಗಿ ನಿಂತಳು, ನಿಂತವಳೇ, " ಈ ಮರಕ್ಕೆ ನಿನ್ನ ಗಂಡನಿಗಿಂತ ವಯಸ್ಸು ಜಾಸ್ತಿ ಗೊತ್ತಾ?" ಅಂತ ಕೇಳಿದಳು. " ಹೌದಾ?" "ಹೌದು, ನಿಮ್ಮ ಮಾವ ಚಿಕ್ಕವರಾಗಿದ್ದಾಗಲೇ ಇದನ್ನ ಇಲ್ಲಿ ಸುಮ್ಮನೆ ನೆಟ್ಟರು" ಆ ಮರ ನನ್ನ ಅಜ್ಜಿ ನೆಟ್ಟಿದ್ದು ಅಂತ ನನಗೆ ತಿಳಿದಿದ್ದರೂ ಸಹ ಅದು ನನಗಿಂತ ವಯಸ್ಸಿನಲ್ಲಿ ಹಿರಿಯದ್ದು ಅಂತ ನನಗೆ ತಿಳಿದಿರಲಿಲ್ಲ ...