"ಅಜ್ಜಿ ನೆಟ್ಟ ನಂದಿ ಬಟ್ಟಲು"

ಹೀಗೆ ಒಮ್ಮೆ ನಮ್ಮ ನಾಟಕದ ತಾಲೀಮು ಮುಗಿಸಿ, ಪಕ್ಕದಲ್ಲೇ ಇದ್ದ ಒಂದು ಸಣ್ಣ ಹೋಟೆಲ್ ನಲ್ಲಿ ರಾತ್ರಿಯ ಡಿನ್ನರ್ ಮುಗಿಸಿ ಆಚೆ ಬಂದು ನಿಂತ ನಾವು, ತಣ್ಣನೆ ಬೀಸುತ್ತಿದ್ದ ಗಾಳಿಯ ಸವಿಯುತ್ತಿದ್ದೆವು. 

ಹೋಟೆಲ್ ನ ಆಚೆ ಒಂದು ಚಿಕ್ಕ ಮರವಿತ್ತು, 10-12 ಅಡಿ ಎತ್ತರವಷ್ಟೇ, ಅಲ್ಲಲ್ಲಿ ಬಾರಿ ಪ್ರಮಾಣದ ಹೂವುಗಳು ಅರಳಿದ್ದವು, ಚಿಕ್ಕ ಹಾಗೂ ಬೆಳ್ಳಗೆ ಇದ್ದ ಹೂವುಗಳು ಯಾವ ರೀತಿಯ ವಾಸನೆಯನ್ನು ಬೀರುತ್ತಿರಲಿಲ್ಲ. 

"ಯಾವ್ ಹೂವು ಇದು? " ಎಂದು ನನ್ನ ಹೆಂಡತಿ ಕೇಳಿದಳು. 
"ನಂದಿ ಬಟ್ಟಲು ಇರಬಹುದು" ಎಂದೆ ನಾನು, 
"ಅಲ್ವಾ ಅಮ್ಮ?" ಅಂತ ನನ್ನ ಅಮ್ಮನ ತಿರುಗಿ ಕೇಳಿದೆ 
"ಹಾ, ಹೌದು, ನಂದಿ ಬಟ್ಟಲೇ!" ಎಂದಳು ನನ್ನ ಅಮ್ಮ. 

ಸುವಾಸನೆ ರಹಿತ ಹೂವುಗಳನ್ನು ಕಂಡರೆ ನನ್ನ ಮಡದಿಗೆ ಎಲ್ಲಿಲ್ಲದ ಒಲವು, ಹೋಗಿ ಒಮ್ಮೆಲೆ ಅದರ ಅಡಿ ನಿಂತು ಅರಳಿದ ಹೂವುಗಳ ಸೌಂದರ್ಯವನ್ನು ಕಣ್ಣುಗಳಲ್ಲೇ ಸವಿಯ ತೊಡಗಿದಳು.

ಅವಳ ಪಕ್ಕದಲ್ಲೆ ನನ್ನ ಅಮ್ಮನೂ ನಡೆದು ಹೋಗಿ ನಿಂತಳು, ನಿಂತವಳೇ, " ಈ ಮರಕ್ಕೆ ನಿನ್ನ ಗಂಡನಿಗಿಂತ ವಯಸ್ಸು ಜಾಸ್ತಿ ಗೊತ್ತಾ?" ಅಂತ ಕೇಳಿದಳು.

" ಹೌದಾ?" 

"ಹೌದು, ನಿಮ್ಮ ಮಾವ ಚಿಕ್ಕವರಾಗಿದ್ದಾಗಲೇ ಇದ್ದನ್ನ ಇಲ್ಲಿ ಸುಮ್ಮನೆ ನೆಟ್ಟರು" 

ಆ ಮರ ನನ್ನ ಅಜ್ಜಿ ನೆಟ್ಟಿದ್ದು ಅಂತ ನನಗೆ ತಿಳಿದಿದ್ದರೂ ಸಹ ಅದು ನನಗಿಂತ ವಯಸ್ಸಿನಲ್ಲಿ ಹಿರಿಯದ್ದು ಅಂತ ನನಗೆ ತಿಳಿದಿರಲಿಲ್ಲ .

ಪ್ರಕೃತಿ ಕಾಲಾತೀತ ಎಂಬ ಸತ್ಯ ನನಗೆ ಅಲ್ಲೇ ಅರಿವಾಗಿದ್ದು.

ಅದೇ ಅರಿವು ನನ್ನನು ನನ್ನ ಬಾಲ್ಯದ ನೆನಪಿನ ನದಿಗೆ ತಳ್ಳಿತು, ಬಿದ್ದವನೆ ಅದರಲ್ಲೇ ಮುಳುಗಿದೆ.

ಆ ಮರದ ಹತ್ತಿರವೇ ಇದ್ದ ನಮ್ಮ ಮನೆ, ಅದೇ ಮನೆಯ ಮುಂದೆ ಇದ್ದ ಬಾರಿ ಗಾತ್ರದ ಸಂಪಿಗೆ ಮರ, ನನ್ನ ಸ್ನೇಹಿತರು, ಎಲ್ಲವೂ ನೆನಪಾಯಿತು. 

ಅದೇ ಮನೆಯಲ್ಲಿ ನಾನು 6 ವರ್ಷ ಕಳೆದಿದ್ದೆ, ಬೆಳಗಾದರೆ ಒಂದು ಉದ್ದದ ಬಿದಿರಿನ ಕೋಲು ಹಿಡಿದು, ಆ ಕೋಲಿನ ತುದಿಗೆ ಇದ್ದ ಕೊಕ್ಕೆಯಿಂದ ಒಂದು ರಾಶಿ ಹೂವುಗಳನ್ನು ಕಿತ್ತು ಸರಿ ಸುಮಾರು ಒಂದು ತಾಸು ಪೂಜೆ ಮಾಡುತಿದ್ದಳು ನನ್ನ ಅಜ್ಜಿ, ಪೂಜೆಯ ಟೈಮಿನಲ್ಲಿ ಅವರನ್ನ ಮುಟ್ಟುವಂತಿಲ್ಲ ಮಾತಾಡಿಸುವಂತಿಲ್ಲ, ಭಾರಿ ಮಡಿ. 

ಫೋಟೋ : ಗೂಗಲ್ 

ಆ ಮರದ ಮುಂದೆ ನಾನು ನನ್ನ ಸ್ನೇಹಿತರೊಡನೆ ದಿನ ಪೂರ್ತಿ ಆಡುತ್ತಿದ್ದೆ, ಆದರೆ ಅದೇ ಮರದ ಹಿಂದೆ ಇದ್ದ ನಮ್ಮ ಮನೆಯ ಗ್ರೌಂಡ್ ಫ್ಲೋರ್ ನಲ್ಲಿ ಒಂದು ಅಂಗಡಿ ರೆಡಿ ಮಾಡ್ಬೇಕು ಅನ್ನೋ ನಿರ್ಣಯ ಮಾಡಿದಾಗ ಆ ಮರವನ್ನ ನೆಲಕ್ಕೆ ಉರುಳಿಸಲಾಯಿತು 

ಗ್ರೌಂಡ್ ಫ್ಲೋರ್ ನಲ್ಲಿ ಅಂಗಡಿ ಏನೋ ತಲೆ ಎತ್ತಿತು, ಅದೇ ಅಂಗಡಿ ಕೆಲ ವರ್ಷಗಳ ನಂತರ ಮುಚ್ಚಿ ಹೋಯಿತು ಕೂಡ, ಎದುರಿಗೆ ಒಂದು ದೊಡ್ಡ ಹೋಟೆಲ್ ಬಂದು ಅದು ಒಂದು ದಿನ ಬಾಗಿಲು ಮುಚ್ಚಿತು, ಆ ಹೋಟೆಲ್ ನ ಮುಂದೆ ಇದ್ದ ಇನ್ನೊಂದು ಮರವು ಉರುಳಿ ಹೋಯಿತು, ನಾನು ಬೆಳೆದು ನಿಂತು ನನ್ನ ಓದು ಮುಗಿಸಿ ನನ್ನ ಮದುವೆಯೂ ನಡೆದು ಹೋಯಿತು, ನನ್ನ ಸ್ನೇಹಿತರ ಮದುವೆ ಮುಗಿದು ಬೇರೆ ಬೇರೆ ದೇಶಗಳಲ್ಲಿ ನೆಲೆ ನೆಲೆಸಿದ್ದು ಆಯಿತು, ಆದರೆ ಈ ನಂದಿ ಬಟ್ಟಲಿನ ಮರ ಮಾತ್ರ ಈ ಎಲ್ಲ ಘಟನೆಗಳಿಗೆ ಸಾಕ್ಷಿಯಾಗಿಯೇ ಅಲ್ಲೇ ನಿಂತಿದೆ.

ಹೀಗೆಯೇ ನಾವು ಮನುಷ್ಯರನ್ನು ಮರೆತರೂ ಅವರು ನಮ್ಮಲ್ಲಿ ನೆಟ್ಟ ಆದರ್ಶಗಳು ಸಾಯಬಾರದು ಮತ್ತು  ನಾವು ಪ್ರಕೃತಿಯನ್ನು ನಾಶ ಮಾಡುವ ಸಾಹಸಕ್ಕೆ ಕೈ ಹಾಕಿದರೆ ಮಾತ್ರ ಅದು ಹಾಳಾಗುತ್ತೆ ಎಂಬ ಸತ್ಯಗಳನ್ನು ಸಾರಿ ಸಾರಿ ಹೇಳುತ್ತಿದೆ ಆ ಮರ. 

ನನ್ನ ನೆಚ್ಚಿನ ನಟ ಒಂದು ಸಿನಿಮಾದಲ್ಲಿ ಇದನ್ನ ಹೇಳಿದರು 
"ಆ ಮರ ದಿನಾ ತುಂಬಾ ಹೂವ ಬಿಡುತ್ತೆ, ಅದನ್ನ ಯಾರಾದ್ರೂ ಕಸ ಅಂದುಕೊಂಡರೂ ಸರಿ, ಅರಳೋದನ್ನ ಯಾರು ಸೆಲೆಬ್ರೇಟ್ ಮಾಡದೆ ಇದ್ದರೂ ಸರಿ, ಯಾರು ಮುಡಿಯದೆ ಇದ್ದರೂ ಸರಿ, ದೇವರ ಪೂಜೆಗೆ ಬಾರದೆ ಇದ್ದರು ಸರಿ, ನಾವು ಅದನ್ನ ಎಷ್ಟೇ ಇಗ್ನೋರ್ ಮಾಡಿದರು ಸರಿ, ಅದು ಸದಾ ಅರಳುತ್ತೆ, ಅದು ಅರಳೋದು ಬೇರೆಯವರಿಗೋಸ್ಕರ ಅಲ್ಲ, ತನಗೋಸ್ಕರ ತಾನು ಅರಳುತ್ತೇ, ಬದುಕಿದ್ದೀನಿ ಅನ್ನೋ ಒಂದು ಕಾರಣಕ್ಕೆ ಅದು ಅರಳತ್ತೆ, ಬೇರೆ ಅವರಿಗೋಸ್ಕರ ಅರಳಿದರೆ ಅದು ಬಲವಂತ, ತನಗೋಸ್ಕರ ಅರಳಿದರೇ ಅದು ಸ್ವಾತಂತ್ರ್ಯ " 

ನಿಮಗೆ ನಾ ಕಥೆ ಹೇಳಿದ ಈ ಮರ ಯಾವುದು ಅಂತ ಗೊತ್ತಾಗಬೇಕೆಂದರೆ ಜಯನಗರದ ನ್ಯಾಷನಲ್ ಕಾಲೇಜ್ ಎದುರು ಇರುವ "ಪ್ಯೂರ್ ಅಂಡ್ ನ್ಯಾಚುರಲ್" ಮುಂದೆ ಒಮ್ಮೆ ಹೋಗಿ ನಿಂತು ನೋಡಿ. 



Comments

  1. ನಿನ್ನ ನೆನಪಿನ ಬುತ್ತಿಯನ್ನ ನಮಗೂ ಉಣಬಡಿಸಿದ್ದಕ್ಕೆ ಧನ್ಯವಾದ. ಬರವಣಿಗೆ ಚೆಂದ ಇದೆ.

    ReplyDelete
  2. It's really a good narration of good old memories with nature, It reminded my memories of the garden which was near my home.

    ReplyDelete
  3. ಬಹಳ ಸೊಗಸಾಗಿದೆ ನಿಮ್ಮ ಈ ಪುಟ್ಟ ಆದರ್ಶದ ಕಥೆ ❤️

    ReplyDelete

Post a Comment

Thanks for leaving a comment!

Popular posts from this blog

"Bengaluru's Dora"

" The curious case of the Marwadi uncle "